ಮಾರ್ಕಸ್, ಆರೇಲಿಯಸ್
	21-180 ರೋಮ್ ಸಾಮ್ರಾಜ್ಯವನ್ನಾಳಿದ 161-180), ರೋಮಿನ ಇತಿಹಾಸದಲ್ಲೇ ಅತ್ಯಂತ ಘನತೆವೆತ್ತ ಸಾಮ್ರಾಟರ ಪೈಕಿ ಒಬ್ಬ. ಹುಟ್ಟಿದ್ದು ರೋಮ್ ನಗರದ ವೀರಸ್ ಮನೆತನದಲ್ಲಿ. ಹದಿನೇಳನೆಯ ವಯಸ್ಸಿನಲ್ಲಿದ್ದಾಗ ಚಕ್ರವರ್ತಿಯಾಗಿದ್ದ. ಆಂಟೋನೈನೆಸ್ ಪಿಯಸ್ ಇವನನ್ನು ದತ್ತು ತೆಗೆದುಕೊಂಡು ತನ್ನ ಪೋಷಣೆಯಲ್ಲಿಟ್ಟುಕೊಂಡು ಇವನ ಸರಳತೆ, ಶಾಂತ ಸ್ವಭಾವ ಮತ್ತು ನಿಷ್ಕಪಟತೆಯನ್ನು ಮೆಚ್ಚಿದ, ಮುಂದೆ ಸಾಮ್ರಾಟನಾಗಲು ಯೋಗ್ಯತೆ ಹೊಂದಿದ್ದ ಇವನಿಗೆ ತನ್ನ ಮಗಳು ಫಾಸ್ಟಿನಳನ್ನು ಕೊಟ್ಟು ಮದುವೆ ಮಾಡಿದ. ಆಗಿನ ಪದ್ಧತಿಯಂತೆ ಈತನಿಗೆ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಪಾಂಡಿತ್ಯ ಪಡೆಯಲು ಶಿಕ್ಷಣ ಕೊಡಲೆತ್ನಿಸಿದ. ಆದರೆ ವಿಚಾರ ಶೀಲನಾದ ಆರೇಲಿಯಸ್‍ಗೆ ಈ ಶಿಕ್ಷಣ ಹಿಡಿಸಲಿಲ್ಲ; ಅವನು ಒಲವು ಇದ್ದದ್ದು ನ್ಯಾಯಶಾಸ್ತ್ರ ಮತ್ತು ನೀತಿ ತತ್ವಗಳಾದ ಸ್ಟೋಯಿಕ್ ತತ್ವದೆಡೆಗೆ. 140 ರಿಂದ 161ರ ತನಕವು ತನ್ನ ಸಾಕು ತಂದೆಯ ಜತೆಯಲ್ಲೇ ಇದ್ದುಕೊಂಡು ಕಾನ್ಸಲ್ ಎಂಬ ದಂಡಾಧಿಕಾರಿಯಾಗಿ ಸೇವೆ ಸಲ್ಲಿಸಿದ. 161ರಲ್ಲಿ ಆ್ಯಂಟೋ ಲೈನಸ್ ಕಾಲವಾದ ಬಳಿಕ ಚಕ್ರವರ್ತಿಯಾದ. ಆಗಿನ ಸಂಪ್ರಂದಾಯದಂತೆ, ಲ್ಯೂಸಿಯಸ್ ಅರೇಲಿಯಸ್ ವೀರಸ್ ಎಂಬವನನ್ನು ಸಹ ಚಕ್ರವರ್ತಿಯಾಗಿ ನೇಮಿಸಿದ. ಆದರೆ ವೀರಸ್ ವಿಷಯಲೋಲುಪನಾಗಿದ್ದುದರಿಂದ ಸಾಮ್ರಾಜ್ಯದ ಹೊಣೆಯೆಲ್ಲವನ್ನೂ ತಾನೇ ವಹಿಸಿಕೊಂಡು ಹತ್ತೊಂಬತ್ತು ವರ್ಷ ಕಾಲ ಆಧಿಪತ್ಯ ನಡೆಸಿದ. 

ನ್ಯಾಯ ನಿಷ್ಟನೂ, ಶಾಂತಿಪ್ರಿಯನೂ ಆಗಿದ್ದ, ಅರೇಲಿಯಸ್‍ಗೆ ಶಾಂತಿ ದೊರಕಲೇ ಇಲ್ಲ. ಮೂರು ಖಂಡಗಳಲ್ಲಿ ಹರಡಿದ್ದ ಸಾಮ್ರಾಜ್ಯದ ಎಲ್ಲೆಯಾಚೆ ದಾಳಿಮಾಡಲೆತ್ನಿಸುತ್ತಿದ್ದ. ಅನಾಗರಿಕ ತಂಡಗಳ ಹಾವಳಿಯನ್ನೆದುರಿಸಬೇಕಾಗಿತ್ತು. ಈಜಿಪ್ಟ್ ಮುಂತಾದ ಪ್ರಾಂತ್ಯಗಳಿದ್ದ ವಿರೋಧಿಗಳನ್ನು ಹತ್ತಿಕ್ಕಬೇಕಾಗಿತ್ತು,. ವಿರಾಮವನ್ನೇ ಕಾಣದೆ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ. ಆಡಳಿತದಲ್ಲಿ ಹಿಂದೆಂದೂ ಕಾಣದ ಸೌಮ್ಯತೆ ಕಂಡುಬಂತು. ಬಡಬಗ್ಗರಿಗೆ ಮತ್ತು ನಿರಾಶ್ರಿತರಿಗೆ ಸಹಾಯವಾಗಲೆಂದು ಕೆಲವು ಸುಧಾರಣೆಗಳನ್ನು ಜಾರಿಗೆ ತಂದ, ಆದರೆ ಅರೇಲಿಯಸ್‍ನ ಹೆಸರು ಶಾಶ್ವತವಾಗಿ ಉಳಿದಿರುವುದು. ಅವನು ಬರೆದಿಟ್ಟಿರುವ ಚಿಂತನಗಳು (ಮೆಡಿಟೇಶನ್) ಎಂಬ ದಿನಚರಿ ಲೇಖನದಿಂದ ದಿನವಿಡಿ ಯುದ್ಧದಲ್ಲಾಗಲೀ, ಆಡಳಿತ ನಿರ್ವಹಣೆಯಲ್ಲಾಗಲೀ ದುಡಿದು ರಾತ್ರಿ ವೇಳೆ ತನ್ನ ಪರ್ಯಾಲೋಚನೆಗಳನ್ನು ಬರೆದಿಡುತ್ತಿದ್ದ, ಇವು ಅಡಕವಾದ ಸಾರೋಕ್ತಿಗಳು. ತನ್ನ ಜೀವನದಲ್ಲಿ ತನ್ನ ಜೀವನದಲ್ಲಿ ಸಾಮ್ರಾಜ್ಯ ಕಾರ್ಯ ನಿರ್ವಹಣೆಯಲ್ಲಿ ಎಂಥ ಧ್ಯೇಯಗಳನ್ನು ಹೊಂದಿದ್ದ, ಅವನ್ನು ಕಾರ್ಯಗತ ಮಾಡಲು ಎಂಥ ನಿವ್ರ್ಯಾಜ ಮನಸ್ಸಿನಿಂದ ಯತ್ನಿಸಿದ ಎಂಬುದನ್ನು ಈ ಬರಹದಲ್ಲಿ ಕಾಣಬಹುದು. ಈತ 180ರಲ್ಲಿ ಸೋಂಕು ರೋಗದಿಂದ ಮರಣ ಹೊಂದಿದ.

	ಈತ ತೀರಿಕೊಳ್ಳುವ ಮೊದಲು ಮಗನನ್ನು ಹತ್ತಿರ ಕರೆದು ನಾಲ್ಕು ಮಾತು ಹೇಳಿದ, ಅದನನ್ನು ಕಳುಹಿಸಿ ತಲೆಯ ಮೇಲೆ ಮುಸುಕು ಎಳೆದುಕೊಂಡು ಏಕಾಂಗಿಯಾಗಿ ಪ್ರಾಣಬಿಟ್ಟ. ಸಾವನ್ನು ಕುರಿತು ಈತನ ಅಭಿಪ್ರಾಯ ಹೀಗಿದೆ. ಸ್ವಾಭಾವಿಕವಾಗಿ ಎನೇನು ಆಗುತ್ತದೋ ಅದರಲ್ಲಿ ನಾನು ಸಮಾಧಾನವಾಗಿ ಚಲಿಸುತ್ತೇನೆ ಕೊನೆಗೆ ನನ್ನ ಉಸಿರನ್ನು ಎಲ್ಲಿಂದ ತೆಗೆದುಕೊಳ್ಳುತ್ತೇನೋ ಆ ವಾಯುಮಂಡಲಕ್ಕೆ ಅದನ್ನು ಬಿಡುತ್ತೇನೆ. ಅಯ್ಯಾ ನೀನು ಈ ರಾಜ್ಯದ ಒಬ್ಬ ನಾಗರಿಕ 5 ವರ್ಷ ಇದ್ದೆಯೋ ಮೂರು ವರ್ಷ ಇದ್ದೆಯೋ ಈ ವ್ಯತ್ಯಾಸದಿಂದ ಆಗುವುದಾದರೂ ಏನು? ಈ ರಾಜ್ಯದಿಂದ ನಿನ್ನನ್ನು ಕಳುಹಿಸುತ್ತಿರುವುದು ಕ್ರೂರವಾದ ರಾಜನಲ್ಲ. ನ್ಯಾಯಶತ್ರುವಾದ ಅಧಿಕಾರಿಯಲ್ಲ. ನಿನ್ನನ್ನು ಇಲ್ಲಿಗೆ ತಂದ ನಿಸರ್ಗಮಾತೆ. ಇದರಿಂದ ನಿನಗೆ ಆದ ತೊಂದರೆ ಎನು? ಈ ಮಾತುಗಳ ಸಮಾಧಾನ ಇವನ ಸಾವಿನಲ್ಲಿ ಕಂಡಿತು. ಇವನ ದೇಹವನ್ನೋ ಇಲ್ಲ ಅದನ್ನು ಸುಟ್ಟ ಬೂದಿಯನ್ನೋ ರೋಮ್ ನಗರಕ್ಕೆ ತಂದರು. ಪ್ರಮುಖ ಜನ ಇವನನ್ನು ದೇವರೆಂದು ಕರೆದರು. ಈತನ ಹೆಸರಿನಲ್ಲಿ ಒಂದು ದೇವಾಲಯ ಕಟ್ಟಿಸಿದರು. ಮಾರ್ಕಸ್ ತನ್ನ ಆಳ್ವಿಕೆಯಲ್ಲಿ ಬಡವರನ್ನು ಕಾಪಾಡುವುದು ಒಂದು ಮುಖ್ಯ ಕಾರ್ಯ ಎಂಬಂತೆ ನಡೆದ. ಈತ ಸತ್ತ ಮೇಲೆ ನಗರದ ಪ್ರಾಜ್ಞ ಜನ ಮಾತ್ರ ಅಲ್ಲ ಅನೇಕ ಸಾಮಾನ್ಯ ಜನ ಕೂಡಾ ತಮ್ಮ ಮನೆ ದೇವರುಗಳ ಮಂಟಪದಲ್ಲಿ ಇವನ ವಿಗ್ರಹ ಇರಿಸಿಕೊಂಡರಂತೆ. ಮಾರ್ಕಸ್ ತನ್ನ ತಿಳುವಳಿಕೆಯಿಂದ ಮತ್ತು ವಿಶುದ್ದ ಉದಾತ್ತ ಜೀವನದಿಂದ ನಿಸ್ಸಂದೇಹವಾಗಿ ದೇವತ್ವ ಮುಟ್ಟಿದ. ದೇಹ ತುಚ್ಚ ವಸ್ತು, ಬುದ್ದಿ ಒಂದೇ ಬೆಲೆಯಾದ ಪದಾರ್ಥ ಸಾವು ಯಾವ ಕ್ಷಣವು ಬರಬಹುದು, ಮುಂದಿನ ಕ್ಷಣವೇ ಅದು ಬರಲಿದೆ ಎಂಬಂತೆ ತಿಳಿದು ನಡೆ : ನಿನಗೆ ಹೆರರ ಗೊಡವೆ ಬೇಡ, ನಿನ್ನ ನಡೆ ಚೆನ್ನಾಗಿರುವಂತೆ ನೋಡಿಕೋ, ನೆಲದ ಮೇಲೆಲ್ಲ ಒಬ್ಬ ಸೂರ್ಯನ ಬೆಳಕು ಬೀಳುವಂತೆ ಎಲ್ಲಾ ದೇಹಗಳಲ್ಲಿ ಒಂದು ಆತ್ಮ ಇದೆ; ನಿನ್ನ ಪಾಲಿಗೆ ಬಂದಿರುವ ಅಲ್ಪ ಕಾಲದಲ್ಲಿ ನಿನ್ನ ಸ್ವಭಾವಕ್ಕೆ ಅನುಗುಣವಾಗಿ ಬಾಳಿ ಹಿರಿಯವನಾಗು; ಜೀವನದ ಯಾವುದೇ ವಿಷಯ ಕುರಿತು ಬೇಸರಗೊಳ್ಳುವುದು ಆತ್ಮಘಾತಕ; ಹಿಂಡಿಗೆ ಒಳ್ಳೆಯದಲ್ಲದ್ದು ದಂಡಿಗೆ ಒಳ್ಳೆಯದಲ್ಲ; ಮಾನವವರ್ಗ ಒಂದು ಎಂದು ಕಾಣು, ನೀನು ಅದರ ಅಂಗ ಎಂದು ತಿಳಿ. ಶಾಂತಿಯನ್ನರಸಿ ಏಕಾಂತಕ್ಕೆ ಹೋಗಬೇಡ. ಆಂತರ್ಯದ ಏಕಾಂತ ಎಲ್ಲಾ ಏಕಾಂತಕ್ಕೂ ಹೆಚ್ಚಿನ ಏಕಾಂತ, ಸಂತುಷ್ಟನಾಗಲು ಹೊರ ಸಹಾಯ ಬಯಸಬೇಡಾ, ನಿನಗೆ ಬಾಳುಬಂದಿರುವುದು, ಸುಖ ಪಡಲೆಂದಲ್ಲ; ಆವಶ್ಯಕವಾದ ಎಲ್ಲಾ ಕೆಲಸವನ್ನು ಸಮಾಧಾನದಿಂದ ಮಾಡು; ಜನರಿಗೆ ಒಳ್ಳೆಯದನ್ನು ಹೇಳಿಕೊಡು, ಇಲ್ಲ ಅವರನ್ನು ಸಹನೆಯಿಂದ ಕಾಣು, ಯಾರು ಏನೇ ಹೇಳಲಿ ತನ್ನ ಗುಣವನ್ನು ತಾನೇ ಹಿಡಿದಿರಬೇಕು; ಏನು ಮಾಡಿದರೂ ಮರಕತ ತನ್ನ ಬಣ್ಣವನ್ನು ಉಳಿಸಿಕೊಂಡೇ ಇರುವಂತೆ ಕೋಪಬೇಡಾ; ಕೋಪ ಬಂದಾಗ ಆದಷ್ಟು ಬೇಗ ಶಾಂತನಾಗು; ನಿನಗೆ ಒಬ್ಬ ಅನ್ಯಾಯ ಮಾಡಿದನೇ, ಅವನು ಅನ್ಯಾಯ ಮಾಡಿದ್ದು ನಿನಗಲ್ಲ ತನಗೆ; ನಿನಗೆ ಕೆಟ್ಟದ್ದನ್ನು ಮಾಡಿದವನಿಗೆ ದೊಡ್ಡ ಶಿಕ್ಷೆ ಕೊಡುವುದು ಹೇಗೆ? ನೀನು ಅವನಂತೆ ನಡೆಯದಿರುವುದರಿಂದ ದಿಟವಾಗಿ ಇರುವ ಕೇಡಿಗೆ ಊಹೆಯಿಂದ ಕೇಡನ್ನು ಸೇರಿಸಬೇಡಾ. ಸಮುದ್ರದ ಅಲೆಗಳು ಬಡಿಯುತ್ತಿರುವ ಬಂಡೆಯಂತಿರು; ಉಪಕಾರಿಯಾಗಿರು; ಉಪಕಾರ ಮಾಡಿದನೆಂದು ಹೆಮ್ಮೆ ಪಡಬೇಡಾ ಇವು ಈ ರಾಜರ್ಷಿ ಗುರುತಿಸಿಟ್ಟುಕೊಂಡ ನೂರಾರು ಮಾತುಗಳಲ್ಲಿ ಕೆಲವು, ಮಾರ್ಕಸ್ ಅಭ್ಯಾಸ ಕಾಲದಲ್ಲಿ ಜೆನೋ ತತ್ವಜ್ಞನ ಸ್ಟೊಯಿಕ್ ಪಂಥಕ್ಕೆ ಸೇರಿದ್ದ. ಸ್ಟೊಯಿಕ್ ಎಂದರೆ ಸಹಿಷ್ಣು, ಅದರ ವಿಚಾರವೇ ಪ್ರಮುಖವಾದ ಒಂದು ಭಕ್ತಿಯ ನೆಲೆಗೆ ಬಂದಿದ್ದ ಒಳ್ಳೆಯ ಬುದ್ದಿ, ಒಳ್ಳೆಯ ಹೃದಯದ ಒಬ್ಬ ಮನುಷ್ಯ ರೂಪಿಸಿಕೊಳ್ಳಬಹುದಾದ ಮಾನವ, ಸಹಜವಾದ ಧರ್ಮವೊಂದನ್ನು ರೂಪಿಸಿಕೊಂಡಿದ್ದ. ಇತಿಹಾಸ ಹೇಳುವ ಸಾವಿರ ದುಷ್ಟ ಜೀವನಗಳಿಂದ ಮನುಜ ಕುಲದ ವಿಷಯದಲ್ಲಿ ನಿರಾಶೆ ಅದೇ ವೇಳೆ ಮಾರ್ಕಸ್ ಆರೇಲಿಯಸ್‍ನ ಜೀವನವನ್ನು ನೆನೆದರೆ ಸಮಾಧಾನ ದೊರೆಯುತ್ತದೆ, ಆಸೆ ಮೊಳೆಯುತ್ತದೆ.
(ಎಂ.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ